ಶಿರಸಿ.೧೯ : ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ 1996 ನೇ ಇಸ್ವಿಯಿಂದ 22 ವರ್ಷಗಳ ಕಾಲ ಸಾಂಪ್ರದಾಯಿಕವಾಗಿ ಭಕ್ತಾದಿಗಳಿಗೆ ದರ್ಶನ ನೀಡಿ ಕಳೆದ 3 ವರ್ಷಗಳ ಹಿಂದೆ ಪಟ್ಟವಿಳಿಸಿಕೊಂಡಿದ್ದ 25 ವರ್ಷ ವಯಸ್ಸಿನ ಕೋಣ ಇಂದು ಬೆಳಗಿನ ಜಾವ ದೈವಾಧೀನವಾಯಿತು.

1930 ರಲ್ಲಿ ಕೋಣನ ವಧೆ ಪಧ್ದತಿಯು ರದ್ದುಗೊಂಡ ನಂತರದಲ್ಲಿ ಪಟ್ಟವೇರಿದ 5 ನೇ ಕೋಣ ಇದಾಗಿದ್ದು ಯಾವುದೇ ರೀತಿಯ ತೊಂದರೆ, ಖಾಯಿಲೆಗಳಿಗೆ ತುತ್ತಾಗದೇ ದೇವಸ್ಥಾನದ ಯಾವುದೇ ವ್ಯವಸ್ಥೆಗೆ ಧಕ್ಕೆ ತರದೇ ಯಾರಿಗೂ ಹೊರೆ ಮಾಡದೇ ತೀರಿಕೊಂಡಿರುವುದು ಈ ಕೋಣದ ವಿಶೇಷ.

ಜಾತ್ರಾ ಹಾಗೂ ಶ್ರೀ ದೇವಿಯ ವಿವಾಹ ಮಹೋತ್ಸವ ನಡೆಯುವ ಸಂದರ್ಭದಲ್ಲಿ ಪಟ್ಟದ ಕೋಣಕ್ಕೆ ವಿಶೇಷ ಪ್ರಾಧಾನ್ಯತೆ ಇದ್ದು ಹಲವಾರು ಸಮುದಾಯಗಳು ದೇವಿಯ ದರ್ಶನದೊಂದಿಗೆ ಕೋಣನ ದರ್ಶನ ಪಡೆದು ಪುನೀತರಾಗುವ ಭಾವನಾತ್ಮಕ ನಂಬಿಗೆಯ ಆಚರಣೆಗಳು ಇಂದಿಗೂ ರೂಢಿಯಲ್ಲಿದೆ. ಎಲ್ಲರಿಗೂ ಪ್ರೀತಿಪಾತ್ರವಾಗಿದ್ದ ಹಾಗೂ ವಿಶೇಷತೆಯುಳ್ಳ ಶ್ರೀ ದೇವಿಯ ಪಟ್ಟದ ಕೋಣ ವಿಧಿವಶವಾಗಿರುವುದು ದೇವಾಲಯದ ಧರ್ಮದರ್ಶಿಗಳು, ಬಾಬುದಾರರು, ನೌಕರರು, ಅರ್ಚಕರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳಿಗೆ ಅತೀವ ದು:ಖವುಂಟಾಗಿದೆ.

ದೇವಸ್ಥಾನದ ಸಂಪ್ರದಾಯದಂತೆ ಮೇತ್ರಿ ಕುಟುಂಬವು ಕೋಣನ ಅಂತ್ಯ ಸಂಸ್ಕಾರದ ಜವಾಬ್ದಾರಿ ನಿರ್ವಹಿಸುವ ಪಧ್ದತಿ ಇದ್ದು ಶಾಂತವ್ವ ಹಾಗೂ ಕುಟುಂಬದವರು ಬನವಾಸಿ ರಸ್ತೆಯಲ್ಲಿರುವ ಶ್ರೀ ದೇವಸ್ಥಾನದ ಜಾತ್ರಾ ವಿಸರ್ಜನಾ ಪೀಠದ ಸ್ಥಳದಲ್ಲಿ ಎಲ್ಲ ವಿಧಿ ವಿಧಾನಗಳನ್ನು ನಡೆಸುವ ಮೂಲಕ ಅಂತ್ಯ ಸಂಸ್ಕಾರವನ್ನು ಪೂರೈಸಿದರು. ಈ ಸಂದರ್ಭದಲ್ಲಿ ಧರ್ಮದರ್ಶಿ ಮಂಡಳಿಯ ಅಧ್ಯಕ್ಷರಾದ ವೆಂಕಟೇಶ ನಾಯ್ಕ,ಉಪಾಧ್ಯಕ್ಷರಾದ ಮನೋಹರ ಮಲ್ಮನೆ, ಧರ್ಮದರ್ಶಿಗಳಾದ ಲಕ್ಷ್ಮಣ ಕಾನಡೆ, ಶಶಿಕಲಾ ಚಂದ್ರಾಪಟ್ಟಣ ಹಾಗೂ ಬಾಬುದಾರ ಮುಖ್ಯಸ್ಥರಾದ ವಿಜಯ ನಾಡಿಗ್,ಜಗದೀಶ ಗೌಡ, ರಮೇಶ ದಬ್ಬೆ ಮತ್ತು ಇತರ ಬಾಬುದಾರರು ಹಾಗೂ ಸಹಾಯಕರು,ಅರ್ಚಕರು, ಸಿಬ್ಬಂದಿ ವರ್ಗದವರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ