ದಾಂಡೇಲಿ ವನ್ಯಧಾಮದ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಕಾಣಸಿಗುವ ನಯನಮನೋಹರ ತಾಣ ಸಿಂಥೇರಿ ರಾಕ್. ಈ ಪ್ರದೇಶದ ಮುಖ್ಯ ಆಕರ್ಷಣೆ ಭೋರ್ಗರೆವ ಕಾನೇರಿ ನದಿಯ ಪಕ್ಕದಲ್ಲಿರುವ 300 ಅಡಿ ಎತ್ತರದ ಬೃಹತ್ ಹಾಗೂ ಕಡಿದಾದ ಬಂಡೆ.

ಈ ಬಂಡೆಯು ಶೀಥಲೀಕರಣದಿಂದಾಗಿ ಬೃಹತ್ ಭೂರಚನೆಗೊಂಡಿದೆ. ಇಂತಹ ಕಡಿದಾದ ಬಂಡೆಗಳು ಈ ಭಾಗದಿಂದ ಗುಡ್ಡಗಾಡು ಪ್ರದೇಶದಿಂದ ನದಿ ತೀರದಿಂದ ಕರಾವಳಿಯವರೆಗೂ ಕಾಣಸಿಗುತ್ತದೆ. ಕಾಳಿ ನದಿಯ ಉಪನದಿಯಾಗಿರುವ ಕಾನೇರಿ ನದಿಯು ಇಲ್ಲಿ ರಭಸವಾಗಿ ಹರಿಯುತ್ತಿದ್ದು ಶೀಥಲೀಕರಣದಿಂದ ಬಹಳಷ್ಟು ಜಾಗಗಳು ಇಲ್ಲಿ ಪೊಳ್ಳಾಗಿವೆ. ಇದು ಅತ್ಯಂತ ಅಪಾಯಕಾರಿ ಸ್ಥಳವಾಗಿದ್ದು ನೂರಾರು ಅಡಿ ಆಳವನ್ನೂ, ಸುಳಿಯನ್ನೂ ಈ ನದಿ ಹೊಂದಿದೆ. ಸಾವಿರಾರು ಪಾರಿವಾಳಗಳ ವಾಸಸ್ಥಾನವಾಗಿರುವ ಈ ಪ್ರದೇಶದ ಸೌಂದರ್ಯವನ್ನು ನೂರಾರು ಜೇನುಗೂಡುಗಳು ಮತ್ತಷ್ಟು ಹೆಚ್ಚಿಸಿವೆ.

ಶಿರಸಿಯಿಂದ ಸಿಂಥೇರಿ ರಾಕ್ ಗೆ ಹೋಗುವವರು ಯಲ್ಲಾಪುರ ಮಾರ್ಗವಾಗಿ ಭಾಗವತಿ ಕ್ರಾಸ್ ನಲ್ಲಿ ಎಡಭಾಗದಲ್ಲಿ ಚಲಿಸಿ ಕುಳಗಿ ತಲುಪಬೇಕು. ಕುಳಗಿಯಿಂದ ಉಳುವಿ ರಸ್ತೆಯಲ್ಲಿ ಸಾಗಿ ಸಿಂಥೇರಿ ರಾಕ್ ತಲುಪಬಹುದು. ಸಂಪೂರ್ಣ ಅರಣ್ಯ ಪ್ರದೇಶದ ನಡುವಿನಲ್ಲಿಯೇ ಸಾಗುವ ಈ ರಸ್ತೆಯಲ್ಲಿ ಶಬ್ದ ಮಾಲಿನ್ಯ ನಿಷೇಧಿಸಲಾಗಿದ್ದು, ಉತ್ತಮವಾದ ಅಂಕುಡೊಂಕಾದ ತಿರುವಿನ ರಸ್ತೆಯಲ್ಲಿ ಸಾಗುತ್ತಾ 137ಕಿಲೋಮೀಟರ್ ದೂರದ ಈ ಪ್ರದೇಶವನ್ನು ತಲುಪಬಹುದು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ