ಶಿರಸಿ, ಅ. 3: ಉತ್ತರಕೋರಿಯಾದ ಸರ್ವಾಧಿಕಾರಿ ಕಿಮ್ ಜುಂಗ್ ನ ಬಗ್ಗೆ ನೀವು ಕೇಳಿರಬಹುದು. ಆತನ ದೇಶದಲ್ಲಿ ಅವನ ಪ್ರತಿಮೆಯ ಮುಂದೆ ಸಾಗುವಾಗಲೆಲ್ಲಾ ವಾಹನ ಸವಾರರು ವಾಹನವನ್ನು ನಿಧಾನವಾಗಿ ಚಲಿಸಬೇಕೆಂಬ ನಿಯಮ ಜಾರಿಯಲ್ಲಿದೆಯಂತೆ. ಆ ಅಧಿಕೃತ ನಿಯಮದಂತೆ ನಮ್ಮ ಶಿರಸಿಯಲ್ಲಿಯೂ ಹೊಸತೊಂದು ಅನಧಿಕೃತ ನಿಯಮವು ಜಾರಿಯಾಗಿದೆ.

ಬಯಲುಸೀಮೆಯಿಂದ ಶಿರಸಿಗೆ ಬರುವವರೆಲ್ಲರೂ ಕೆಲವಾರು ತಿಂಗಳುಗಳಿಂದ ತಪ್ಪದೇ ಈ ನಿಯಮವನ್ನು ಪಾಲಿಸುತ್ತಾ ಬಂದಿದ್ದಾರೆ.

ಏನಿದು ವಿನೂತನ ನಿಯಮ?
ಈ ಅನಧಿಕೃತ ನಿಯಮದ ಪ್ರಕಾರ ವಾಹನ ಚಾಲಕರು ತಮ್ಮ ವಾಹನಗಳಲ್ಲಿ ಬರುವಾಗ ತಮ್ಮ ಇಡೀ ದೇಹವನ್ನು ಕುಲುಕುಲು ಕುಲುಕಿಸುತ್ತಲೇ ಬರಬೇಕು. ಈ ಕುಲುಕಾಟದಿಂದ ಹೊಸತೊಂದು ಚೈತನ್ಯ ಭುಗಿಲೆದ್ದು ಶಿರಸಿಗೆ ಬರುವ ಮುನ್ನ ಪ್ರತಿಯೊಬ್ಬರೂ ಸಕ್ರೀಯರಾಗಿ ಬರಬೇಕೆಂಬುದು ಬಹುಶಃ ಈ ವ್ಯವಸ್ಥೆಗೆ ಕಾರಣವಿರಬಹುದು. ಆದ್ದರಿಂದ ಶಿರಸಿಯಿಂದ ಇಸಳೂರಿನವರೆಗೂ ಹೊಸತೊಂದು ನೃತ್ಯ ಪಥ ನಿರ್ಮಾಣವಾಗಿದ್ದು, ಈ ದಾರಿಯಲ್ಲಿ ಸಂಚರಿಸುವ ಎಲ್ಲರೂ ರಸ್ತೆಯಲ್ಲಿನ ಹೊಂಡಗುಂಡಿಗಳನ್ನು ದಾಟುತ್ತಾ ವಾಹನದೊಳಗೇ ನರ್ತಿಸುತ್ತಾ, ಕುಲುಕಾಡುತ್ತಾ, ಏಳುಬೀಳುಗಳ ಸವಾರಿಯನ್ನು ಆಸ್ವಾದಿಸುತ್ತಾ ಸಾಗುವ ಈ ವ್ಯವಸ್ಥೆ ಅತ್ಯದ್ಭುತವಾಗಿದೆ.

ಈ ಉಚಿತ ವ್ಯವಸ್ಥೆಯು ಗಟ್ಟಿಮುಟ್ಟಾದ ಜನರಿಗೆ ಮಾತ್ರವಲ್ಲದೆ, ಅಶಕ್ತರು, ವೃದ್ಧರೂ ಸಹಾ ನರ್ತಿಸಲೇಬೇಕೆಂಬ ನಿಯಮವಿಲ್ಲಿ ತಪ್ಪದೇ ಪಾಲನೆಯಾಗುತ್ತಿದೆ. ಈ ಹೊಸಪಥದಿಂದ ವಾಹನಗಳು ಜಖಂ ಆದರೂ ಸಹಾ ಒಂದೊಳ್ಳೆ ಶಿಲಾಯುಗದ ಸವಾರಿ ದೊರಕಲೆನ್ನುವ ಕಾರಣದಿಂದ ರಸ್ತೆ ಅತ್ಯದ್ಭುತವಾಗಿ ಕುಲಗೆಟ್ಟಿದ್ದರೂ ಸಹಾ ಸಂಬಂಧಪಟ್ಟವರು ಇದನ್ನೇ ಮುಂದುವರೆಸುವ ಯೋಚನೆಯಲ್ಲಿದ್ದಂತೆ ತೋರುತ್ತಿದೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ