ದಾಂಡೇಲಿ, ಸೆ.೨೬ : ಜಿಲ್ಲೆಯಲ್ಲಿಯೆ ಅತ್ಯಂತ ಎತ್ತರವಾದ ರಾವಣ, ಕುಂಭಕರ್ಣ ಮತ್ತು ಮೇಘನಾಥ ಮೂರ್ತಿಗಳನ್ನು ಒಳಗೊಂಡ ದಸರಾ ಹಬ್ಬವನ್ನು ಎಂದಿನಂತೆ ನಗರದ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಈ ವರ್ಷವು ಅದ್ದೂರಿಯಿಂದ ನಡೆಸಲಿದೆ. ಸೆಪ್ಟೆಂಬರ್ 30 ರಂದು ಬೆಳಿಗ್ಗೆ 9 ಘಂಟೆಯಿಂದಲೆ ಕಾರ್ಖಾನೆಯ ಡಿಲಕ್ಸ್ ಮೈದಾನದಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ.

ರಾಮಲೀಲೋತ್ಸವದ ಜೊತೆ ಜೊತೆಯಲ್ಲಿಯೆ ಡಿಲಕ್ಸ್ ಮೈದಾನದಲ್ಲಿ ಮುಂಜಾನೆಯಿಂದಲೆ ವಿವಿಧ ರೀತಿಯ ಮೇಳಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಮೇಳಾದಲ್ಲಿ ಹಲವು ಬಗೆಯ ತಿಂಡಿ ತಿನಸುಗಳ ಮಾರಾಟ ಮಳಿಗೆಗಳು, ಮಕ್ಕಳಿಗಾಗಿ ಹಲವು ಬಗೆಯ ಆಟಗಳು ಹಾಗೂ ಸ್ಥಳೀಯ ಕುಶಲಕರ್ಮಿಗಳ ಕೈಚಳಕದಲ್ಲಿ ಅರಳಿದ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟದ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಸಾರ್ವಜನಿಕರನ್ನು ರಂಜಿಸಲು ಮುಖವಾಡ ವೇಷಧಾರಿಗಳು ರಾಮಲೀಲೋತ್ಸವಕ್ಕೆ ಮೆರುಗು ನೀಡಲಿದ್ದಾರೆ. ಅಂದು ಸಂಜೆ : 4.30 ರಿಂದ 6.30 ರವರೆಗೆ ಆಯ್ದ ಸ್ಥಳೀಯ ಕಲಾವಿದರುಗಳಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. 6.30 ರಿಂದ 7.30 ಘಂಟೆಯವರೆಗೆ ಮತ್ತು 8 ರಿಂದ 10 ಘಂಟೆಯವರೆಗೆ ಕೊಲ್ಲಾಪುರದ ಸುಪ್ರಸಿದ್ದ ಆರ್ಕೆಷ್ಟ್ರಾ ತಂಡದವರಿಂದ ರಸಮಂಜರಿ ಕಾರ್ಯಕ್ರಮ ಜರಗಲಿದೆ. ಇದರ ಮಧ್ಯೆ ದುಷ್ಟ ಶಕ್ತಿಗಳ ದಮನದ ಪ್ರತೀಕವಾಗಿ ರಾವಣ, ಕುಂಭಕರ್ಣ ಹಾಗೂ ಮೇಘನಾಥನ ಪ್ರತಿಕೃತಿಗಳನ್ನು 7.30 ಗಂಟೆಗೆ ದಹನ ಮಾಡಿದ ಬಳಿಕ ರಾಮಲೀಲಾ ಸಂಪನ್ನಗೊಳ್ಳಲಿದೆ ಎಂದು ಕಾಗದ ಕಾರ್ಖಾನೆಯ ವೆಲ್‍ಪೇರ್ ಮತ್ತು ಸೋರ್ಟ್ಸ್ ಸಮಿತಿಯ ಕಾರ್ಯದರ್ಶಿಯಾಗಿರುವ ರಾಜೇಶ ತಿವಾರಿ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಜಿ.ಗಿರಿರಾಜ ಅವರುಗಳು ಮಂಗಳವಾರ ಸುದ್ದಿಗಾರರೊಂದಿಗೆ ಕಾರ್ಯಕ್ರಮದ ಪೂರ್ವ ತಯಾರಿಯ ಕುರಿತಂತೆ ಮಾಹಿತಿ ನೀಡುತ್ತಾ ಮಾತನಾಡಿದರು.

ರಾಮಲೀಲೋತ್ಸವ ಕಾರ್ಯಕ್ರಮದಲ್ಲಿ 48 ಅಡಿ ಎತ್ತರದ ರಾವಣನ ಮೂರ್ತಿ, 45 ಅಡಿ ಎತ್ತರದ ಕುಂಭಕರ್ಣನ ಪ್ರತಿಮೆ ಮತ್ತು 45 ಅಡಿ ಎತ್ತರದ ಮೇಘನಾಥನ ಮೂರ್ತಿಯನ್ನು ರೂ: 2,60,000/- ವೆಚ್ಚದಲ್ಲಿ ಪ್ರತಿಷ್ಟಾಪಿಸಲಾಗುತ್ತಿದ್ದು, ತೆರಗಾಂ ಇಲ್ಲಿನ ಉಮೇಶ ಮರಿಯಪ್ಪ ರಾಹುತ್ ಇವರ ನೇತೃತ್ವದಲ್ಲಿ ನಡೆಯಲಿದೆ. ಕಳೆದ ವರ್ಷದಂತೆ ಈ ವರ್ಷವೂ ಬಾರಿ ಸುಡುಮದ್ದು ಪ್ರದರ್ಶನಕ್ಕೆ ತೆರೆ ಎಳೆದಿದ್ದು, ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮೇಳಾವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸರಿ ಸುಮಾರು 40 ರಿಂದ 50 ಸಾವಿರ ಜನ ಭಾಗವಹಿಸುವ ನಿರೀಕ್ಷೆಯಿದ್ದು, ಸರ್ವರಿಗೂ ಮುಕ್ತ ಅವಕಾಶವಿದೆ. ಅಂದು ಸುಗಮ ಸಂಚಾರ ವ್ಯವಸ್ಥೆಗಾಗಿ ದ್ವಿಚಕ್ರ ವಾಹನಗಳಿಗೆ ಕನ್ಯಾ ವಿದ್ಯಾಲಯದ ಆವರಣದಲ್ಲಿ ಮತ್ತು ಇನ್ನಿತರ ವಾಹನಗಳಿಗೆ ಜೆವಿಡಿ ಆವರಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ್ದಾರೆ. ಸೆ:29 ರಂದು ಎಂದಿನಂತೆ ಈ ವರ್ಷವೂ ಕಾರ್ಖಾನೆಯೊಳಗಡೆ ಆಯುಧ ಪೂಜೆ ನಡೆಯಲಿದ್ದು, ಕಾರ್ಖಾನೆಯಲ್ಲಿ ಕೆಲವೊಂದು ವಿಭಾಗಳ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಆಯುಧ ಪೂಜೆಗೆ ಈ ಭಾರಿ ಸಾರ್ವಜನಿಕರಿಗೆ ಅವಕಾಶ ವಿರುವುದಿಲ್ಲ. ಮುಂದಿನ ವರ್ಷದಿಂದ ಆಯುಧ ಪೂಜೆಯನ್ನು ವೀಕ್ಷಿಸಲು ಅವಕಾಶ ನೀಡಲಾಗುವುದು. ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕಾಗಿ ರಾಜೇಶ ತಿವಾರಿ ಮತ್ತು ಕೆ.ಜಿ.ಗಿರಿರಾಜ ತಿಳಿಸಿದರು. ಈ ಸಂದರ್ಭದಲ್ಲ್ಲಿ ರಾಜೇಶ ತಿವಾರಿ, ಕೆ.ಜಿ.ಗಿರಿರಾಜ, ಡಿವೈಎಸ್ಪಿ ಡಿ.ಎಸ್.ಪವಾರ್, ಸಿಪಿಐ ವೀರಣ್ಣ ಹಳ್ಳಿ, ಕಾರ್ಖಾನೆಯ ಭದ್ರತಾ ಅಧಿಕಾರಿ ಎಂ.ಪಿ.ಮಿಶ್ರಾ, ಪಿಎಸೈಗಳಾದ ಉಪ್ಪಾಸ ಪರಮಾರ, ಪೂಜಾರ ಉಪಸ್ಥಿತರಿದ್ದು ಅಗತ್ಯ ಸಲಹೆ ಸೂಚನೆ ನೀಡಿದರು.

ಆಸಕ್ತ ಮಾರಾಟಗಾರರು ಮೇಳಾದಲ್ಲಿ ಇರುವ ಮಳಿಗೆಗಳನ್ನು ಪಡೆಯುವುದಕ್ಕಾಗಿ ರಾಜೇಶ ತಿವಾರಿ-ಮೊಬೈಲ್ ನಂ: 9742257466 ಅಥವಾ 08284-231262 ಸಂಖ್ಯೆಗೆ ಸೆ: 28 ರೊಳಗೆ ಸಂಪರ್ಕಿಸುವಂತೆ ಕೋರಲಾಗಿದೆ.

ಸೆ: 30 ರಂದು ನಡೆಯಲಿರುವ ರಾವಣ, ಕುಂಭಕರ್ಣ ಮತ್ತು ಮೇಘನಾಥನ ಪ್ರತಿಮೆಯನ್ನು ಸುಡುವ ಕಾರ್ಯಕ್ರಮ ನೋಡಲು ನಗರದ ಜನ ಮಾತ್ರವಲ್ಲದೇ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಜನ ಭಾಗವಹಿಸುತ್ತಾರೆ. ಒಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮತ್ತು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಇವರ ಧಾರ್ಮಿಕ ಕಾರ್ಯ ಶ್ಲಾಘನೀಯವಾದುದು.

* ಸಾಂದರ್ಭಿಕ ಚಿತ್ರ

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ