ಯಲ್ಲಾಪುರ: ತಾಲೂಕಿನ ಬಾಸಲದಲ್ಲಿ ಕಳೆದ ಒಂದು ತಿಂಗಳಿಂದ ರಿಲಯನ್ಸ್ ಟವರ್ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯನ್ನು ಸುಮಾರು ಎರಡು ಗಂಟೆಗಳ ಕಾಲ ತಡೆದು ಆಕ್ರೋಶ ವ್ಯಕ್ತಪಡಿಸಿದರು. ರಿಲಯನ್ಸ್ ಕಂಪನಿಯ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ನಂತರ ತಹಶೀಲ್ದಾರರಿಗೆ ಮನವಿ ನೀಡಿ ಟವರ್ ಪುನರಾರಂಭಿಸುವ ಬಗ್ಗೆ ಒತ್ತಾಯಿಸಿದರು.

ಸ್ಥಳೀಯ ಮುಖಂಡ ಎಸ್ ಎನ್ ಗಾಂವ್ಕರ್ ಬೆಳ್ಳಿಪಾಲ್ ಮಾತನಾಡಿ ,ನಮಗೆ ಬಿಎಸ್ ಎನ್ ಎಲ್ ಟವರ್ ಅಗತ್ಯತೆ ಇದ್ದು, ಸರ್ಕಾರ ಅದನ್ನು ಮಂಜೂರಿ ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟಾನಾಕಾರರು ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟು ಹಿಡಿದಿದ್ದರಿಂದ ರಸ್ತೆ ತಡೆಯಿಂದಾಗಿ ವಾಹನಗಳ ಸಂಚಾರದಲ್ಲಿ ತೊಂದರೆಯಾಗಿ ಪ್ರಯಾಣಿಕರು ಪರದಾಡುವಂತಾಯಿತು. ಇದರಿಂದ ಎಚ್ಚೆತ್ತ ರಿಲಾಯನ್ಸ ಅಧಿಕಾರಿ ಸತೀಶ ನಾಯ್ಕ, ತಹಶೀಲ್ದಾರ ಡಿ.ಜಿ.ಹೆಗಡೆ, ಪೊಲೀಸ್ ಇಲಾಖೆಯ ಎನ್ ಆರ್ ರಾಥೊಡ್, ಸಕ್ರಪ್ಪ ಬ್ಯಾಳಿ ರಸ್ತೆ ತಡೆ ಹಿಂಪಡೆಯುವಂತೆ ಮನವೊಲಿಸಲು ಪ್ರಯತ್ನಿಸಿದರು.

ಬೇಡಿಕೆಯಂತೆ ರಿಲಯನ್ಸ್ ಟವರ್‍ನ್ನು ಪುನರಾರಂಭಿಸುವ ಬಗ್ಗೆ ಕಂಪನಿಯ ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಪಾರ್ವತಿ ಭಟ್ಟ, ಪ್ರಮುಖರಾದ ಗಣಪತಿ ವಾಗಳ್ಳಿ, ರಾಮಣ್ಣ ಕಟ್ಟೆಮನೆ, ಮಂಜು ಬಾಸಲ್, ಪ್ರಸನ್ನ ಗಾಂವ್ಕರ್, ಜಿ.ವಿ.ಭಟ್ಟ ಬಾಸಲ, ಶ್ರೀಪಾದ ಗಾಂವ್ಕರ್ , ಮಹಾಬಲೇಶ್ವರ ಭಟ್ಟ, ಉಮಾಶಂಕರ್ ಬಾಸಲ್, ಚಂದ್ರಕಾಂತ ಮರಾಠೆ, ನರಸಿಂಹ ಕೋಮಾರ್, ಎಸ್. ವಿ. ಗಾಂವ್ಕಾರ, ಸೀತಾ ಭಟ್ಟ ಸೇರಿದಂತೆ ನೂರಾರು ಗ್ರಾಹಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ