‘ಹೆಣ್ಣು ಅಬಲೆಯಲ್ಲ’ ಎಂಬ ಸಂದೇಶವನ್ನ ಒಂದು ವರ್ಗ ಜಗತ್ತಿಗೆ ಸಾರುವ ಪ್ರಯತ್ನ ಮಾಡುತ್ತಿರುವಾಗ ಆ ಪ್ರಯತ್ನವನ್ನು ಚಿವುಟಿ ಹಾಕುವಂತಹ ವಿದ್ಯಮಾನವನ್ನ ನಾವಿಂದು ಪ್ರತ್ಯಕ್ಷವಾಗಿ ನೋಡುತ್ತಿದ್ದೇವೆ. ‘ಹೆಣ್ಣು ಅಬಲೆ’ ಎಂಬುದನ್ನ ವಾಸ್ತವಿಕತೆಗಳು ಪುನಹ ಪುನಹ ಎಚ್ಚರಿಕೆಯ ಕರೆಘಂಟೆಯನ್ನ ನೀಡುತ್ತಿದೆ. ಕಾರಣ ಸಮಾಜದಲ್ಲಿ ಹೆಣ್ಣಿನ ಮೇಲಿನ ದೌರ್ಜನ್ಯ ದಿನೇದಿನೇ ದ್ವಿಗುಣಗೊಳ್ಳುತ್ತಿರುವುದು. ಇಂದು ಯಾವ ಪೇಪರ್ ನೋಡಿದರೂ, ಯಾವ ಟಿವಿ ಚಾನೆಲ್ ನೋಡಿದರೂ ಶೇಕಡಾ ಮೂವತ್ತರಷ್ಟು ಅತ್ಯಾಚಾರ ಸಹಿತ ನ್ಯೂಸ್‌ಗಳು ಎಂಬುದು ವಿಷಾದದ ಸಂಗತಿ. ಬಲಿಷ್ಠ ಭಾರತವನ್ನು ಕಟ್ಟುವ ಯೋಜನೆಗೆ ತೊಡಕಾಗಲು ಇಂತಹ ಪ್ರಕರಣಗಳು ಇಂಬು ನೀಡುತ್ತಿವೆಯೆಂದರೂ ತಪ್ಪಾಗಲಾರದು.

ಏತಕೀ ದೌರ್ಜನ್ಯ? ಏನಿದರ ಲಾಭ? ಎಲ್ಲಿಯತನಕ ಈ ದೌರ್ಜನ್ಯ? ಇಂತಹ ಪ್ರಶ್ನೆಗಳು ಪ್ರಜ್ಞಾವಂತರ ಮನದೊಳಗೆ ಆಗಾಗ ಪ್ರವೇಶ ಮಾಡುವುದಾದರೂ ಕೊನೆಗುಳಿಯುವುದು ಪ್ರಶ್ನೆಯೇ. ಯಾಕೆಂದರೆ ಇಂತಹ ದೌರ್ಜನ್ಯಗಳನ್ನ ಖಂಡಿಸುವವರು ಮಾರಿಗೊಬ್ಬರು ಸಿಗುತ್ತಾರೆ. ಆದರೆ ತಪ್ಪಿಸುವವರು ಯಾರೂ ಇಲ್ಲ. ಘಟನೆ ನಡೆದ ಮೇಲೆ ವಿಷಾದ ವ್ಯಕ್ತಪಡಿಸುವವರು ಎಲ್ಲಾ ಕಡೆ ಸಿಗುತ್ತಾರೆ. ಆದರೆ ನಿರ್ಮೂಲನೆ ಮಾಡುತ್ತೇನೆ ಎಂದು ಧೈರ್ಯದಿಂದ ಹೇಳುವವರು ಯಾರೂ ಇಲ್ಲ. ಯಾಕೆಂದರೆ ನಿರ್ಮೂಲನೆಯೆಂಬುದು ‘ಸುಳ್ಳು ಹೇಳುವಷ್ಟು’‘ಮೋಸ ಮಾಡುವಷ್ಟು’ ಸುಲಭವಾಗಿ ಆಗುವಂತದ್ದಲ್ಲ ಎಂಬುದು ಪ್ರತಿಯೊಬ್ಬ ವ್ಯಕ್ತಿಗೂ ತಿಳಿದಿರುತ್ತದೆ. ಆದರೂ ನೆಪವ ಕಾಯುವ ಮಹಾಶಯರಿಗೆ ಇಂತಹ ವರ್ತಮಾನಗಳು ಸಿಹಿಭಕ್ಷ್ಯ ನೀಡಿದಂತಾಗುತ್ತದೆ, ಪ್ರಾತ್ಯಕ್ಷಿಕ ಘಟನೆಗಳು ನಮ್ಮ ಸುತ್ತಮುತ್ತಲಲ್ಲೇ ಸಿಗುತ್ತವೆ. ತಾಜಾ ತಾಜಾ ಉದಾಹರಣೆಗಳು ಸಾಲುಸಾಲಾಗಿವೆ. ಏನದು?

ವಿಪರ್ಯಾಸ ನೋಡಿ. ಅಂದಿನ ದೆಹಲಿ ಅತ್ಯಾಚಾರದ ಪ್ರಕರಣ ಬಯಲಾಗುತ್ತಿದ್ದಂತೆ ಮಾಧ್ಯಮಗಳಲ್ಲಿ ವಾರಗಟ್ಟಲೆ ಪ್ರಸಾರವಾಗತೊಡಗಿತು. ಬ್ರೇಕಿಂಗ್ ನ್ಯೂಸ್ ಗಾಗಿ ಹಪಹಪಿಸುವ ಚಾನೆಲ್‌ಗಳಿಗಂತೂ ದೊಡ್ಡ ಹಬ್ಬವೇ ಆಯಿತು. ಯಾವುದಾದರೊಂದು ಮಾರ್ಗದಲ್ಲಿ ತಾವು ಗುರುತಿಸಿಕೊಳ್ಳುವಂತಾಗಬೇಕೆಂದು ಕಾಯುತ್ತಿದ್ದ ಕೆಲ ದೊಡ್ಡ ತಲೆಗಳು ಪ್ರತಿಭಟನೆಯ ಮುಖವಾಡ ಧರಿಸಿ ಬೀದಿಗಿಳಿದರು. ಕೈಯಲ್ಲಿ ಮೈಕ್ ಹಿಡಿದು ಜನರನ್ನ ಸೆಳೆಯುವಲ್ಲಿ ಸಫಲರಾದರು. ಇದರಿಂದಾದ ಪ್ರಯೋಜನವೇನು? ಅಷ್ಟೆ..!! ಅಷ್ಟೇ ಪ್ರಯೋಜನ. ಆ ಒಂದು ವಾರ ಅತ್ಯಾಚಾರದ ವಿರುದ್ಧದ ಕೂಗಿನ ಕಾವು ತುಂಬಿಕೊಂಡಿತು. ಕಾಲಾಂತರದಲ್ಲಿ ಅದೇ ಜನಗಳ ದನಿ ತಣ್ಣಗಾಯಿತು. ತಾವಾಯಿತು, ತಮ್ಮದಾಯಿತು ಎಂಬಂತೆ ಸುಮ್ಮನಾದರು. ನಂತರ ಇನ್ನೆಲ್ಲೋ ಅತ್ಯಾಚಾರ. ಅದೇ ಜನ ಮೇಲೆದ್ದು ಪ್ರತಿಭಟನೆಗೆ ಸಜ್ಜಾಗುತ್ತಾರೆ. ಒಂದೆರಡು ದಿನವಷ್ಟೇ. ಮತ್ತೆ ಯಥಾಪ್ರಕಾರ. ಹಾಗಾದರೆ ನಾವು ಯಾರನ್ನು ದೂಷಿಸುವುದು? ಕೃತ್ಯ ಎಸಗಿದವರನ್ನೇ? ಅಥವಾ ಬಲಿಪಶುವಾದವರನ್ನೇ? ಅಥವಾ ಎಲ್ಲಾ ಮುಗಿದ ಮೇಲೆ ವಿರೋಧಿಸಿ, ಭಾಷಣ ಮಾಡುವವರನ್ನೇ? ಅಥವಾ ದೇಶ ಇರೋದೇ ಹೀಗೆ. ಬದಲಾಯಿಸೋಕೆ ಸಾಧ್ಯನೇ ಇಲ್ಲ ಅಂತ ಹೇಡಿಯಾಗಿ ಕೈಕಟ್ಟಿ ಕುಳಿತವರನ್ನೇ? ದೂಷಿಸುವುದಕ್ಕಿಂತ ಒಮ್ಮೆ ಅವಲೋಕಿಸುವುದು ಉತ್ತಮ.

ಮಹಿಳೆಯರ ಮೇಲಿನ ದೌರ್ಜನ್ಯವನ್ನ ಪ್ರತಿಭಟನೆಗಳಿಂದ ಮಟ್ಟ ಹಾಕಲು ನಿಜವಾಗಿಯೂ ಸಾಧ್ಯವೇ? ಅತ್ಯಾಚಾರಿಯೆಂದರೆ ಆ ಕ್ಷಣದ ಸುಖವನ್ನು ಬಯಸುವವನು. ಅಂತಹ ವ್ಯಕ್ತಿ ಕಾನೂನು, ಪ್ರತಿಭಟನೆ ಮುಂತಾದವುಗಳಿಗೆ ತಲೆಕೆಡಿಸಿಕೊಳ್ಳಲಾರ. ಆ ಪೈಶಾಚಿಕ ಮನಸ್ಸಿಗೆ ಬೇಕಿರೋದು ವಿಕೃತ ಸುಖ. ತದನಂತರದ ಚಿಂತೆ ಅವನಿಗಿರಲ್ಲ. ಇರುವವರು ಅಂತಹ ಕಾರ್ಯಕ್ಕೆ ಕೈಹಾಕರು. ಇನ್ನೊಂದು ಕಡೆ – ಪ್ರತಿಭಟನೆಯೆಂದರೆ ಏನು? ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು. ಆ ಆಕ್ರೋಶ ಎಲ್ಲಿಯತನಕ? ಮೇಲಾಧಿಕಾರಿಗಳಿಂದ ಆಶ್ವಾಸನೆ ಸಿಗುವ ತನಕ. ಮೇಲಾಧಿಕಾರಿಗಳಾಗಲೀ, ಕಾನೂನಾಗಲೀ.. ಅಪರಾಧಿಗೆ ಕ್ರಮ ಜರುಗಿಸಬಲ್ಲುದೇ ಹೊರತು, ಅಪರಾಧ ಮಾಡಿದರೆ ಕಠಿಣ ಶಿಕ್ಷೆ ನೀಡುತ್ತೇವೆಯೆಂದು ಆದೇಶ ಹೊರಡಿಸಬಹುದೇ ಹೊರತು ಅಪರಾಧ ಆಗದಂತೆ ತಡೆಯುವುದು ಸಾಧ್ಯವಿಲ್ಲದ ಮಾತು.

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ತಡೆ ಹೇಗೆ?

ದೀಪದ ಬುಡದಲ್ಲಿ ಕತ್ತಲು ಎಂಬಂತೆ ನಿಜವಾದ ತಪ್ಪಿತಸ್ಥ ಇರುವುದು ನಮ್ಮ ಮನೆಯಲ್ಲಿ. ಹೌದು. ಪ್ರತಿಯೊಬ್ಬರ ಮನೆಯಲ್ಲೂ, ಮನದಲ್ಲೂ ಒಬ್ಬೊಬ್ಬ ತಪ್ಪಿತಸ್ಥ ಇದ್ದಾನೆ. ಪ್ರತಿಯೊಬ್ಬ ವ್ಯಕ್ತಿ, ತನ್ನನ್ನು ಹಾಗೂ ತನ್ನ ಮನೆಯವರನ್ನು ಹಾದಿ ತಪ್ಪದಂತೆ ನೋಡಿಕೊಂಡರೆ ಸಾಕು, ಜಗತ್ತೇ ಬದಲಾಗುತ್ತದೆ. ಇಂದು ವಯಸ್ಸಿಗೆ ಬಂದ ಮಗ/ಮಗಳು ಏನು ಮಾಡುತ್ತಿದ್ದಾರೆಂದು ಪಾಲಕರಿಗೆ ಕಿಂಚಿತ್ತೂ ಗೊತ್ತಿರಲ್ಲ. ‘ಕಾಲೇಜಿಗೆ ಹೋಗುತ್ತಾರೆ’ ಎಂಬ ಸಾಲನ್ನು ಬಿಟ್ಟರೆ ಹೊರತಾದ ವಿಷಯಗಳ ಅರಿವು ಯಾರಿಗೂ ಇರಲ್ಲ. ಮಕ್ಕಳು ತಪ್ಪು ದಾರಿ ಹಿಡಿದ ನಂತರ ‘ಅಯ್ಯೋ ನನ್ನ ಮಕ್ಕಳು ಹಾಳಾದ್ರು’ ಅಂತ ಪರಿತಪಿಸುವುದೇ ಅವರ ಸಾಧನೆ ಎಂಬುದ ಬಿಟ್ಟರೆ ಮುಂಜಾಗ್ರತೆಯೆಂಬ ಪರಿಕಲ್ಪನೆಯನ್ನು ಮೂಡಿಸಿಕೊಳ್ಳದಿರುವುದು ಹಲವು ದುಷ್ಪರಿಣಾಮಗಳಿಗೆ ಎಡೆಮಾಡಿಕೊಟ್ಟಿದೆ. ಯಾಕೆಂದರೆ ಇಂದಿನ ಅತ್ಯಾಚಾರದ ಪ್ರಕರಣಗಳಿಗೆ ಆ ‘ದಾರಿ ತಪ್ಪಿದ’ ಮಕ್ಕಳೇ ಕಾರಣರಾಗುತ್ತಿರುವುದು. ಹಾಗಾಗಿ ಇಂತಹ ಘಟನೆಗಳನ್ನು ಮಟ್ಟ ಹಾಕುವುದು ನಮ್ಮ ನಮ್ಮ ಕೈಯಲ್ಲೇ ಇದೆ ಅನ್ನೋದು ಬಿಟ್ಟರೆ ಯಾವ ಪ್ರತಿಭಟನೆಯಿಂದಲೂ, ಯಾವ ಭಾಷಣದಿಂದಲೂ ಸಾಧ್ಯವಿಲ್ಲ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ