ದಿನಾಂಕ ೦೧-೦೭-೨೦೧೫ ಬುಧವಾರ ಶಿರಸಿಯ ತೇಲಂಗ ಪ್ರೌಢಶಾಲೆಯಲ್ಲಿ ವನವಾಸಿ ಕಲ್ಯಾಣ ಸಮಿತಿ ಹಾಗೂ ಹಿಂದೂ ಜನಜಾಗೃತಿ ಸಮಿತಿಯವರ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡುವುದರ ಜೊತೆಗೆ ಅವು ಹಾಳಾಗದಂತೆ ರಕ್ಷಣಾ ಕವಚವನ್ನೂ ಹಾಕಲಾಯಿತು. ಇದಕ್ಕೆ ಶಿರಸಿ ವಲಯ ಅರಣ್ಯ ಇಲಾಖೆಯವರೂ ಸಹಾ ಅಲ್ಲಿ ಬಂದು ಸಹಕಾರ ನೀಡಿದರು. ಮಕ್ಕಳು ತಾವೇ ಸ್ವತಃ ಕಾಳಜಿಯಿಂದ ಗಿಡಗಳನ್ನು ನೆಟ್ಟು ಇನ್ಮುಂದೆ ತಾವೇ ಅದರ ರಕ್ಷಣೆ ಮಾಡುವುದಾಗಿಯೂ ಸಹಾ ಹೇಳಿದ್ದು ಅವರ ಈ ಉತ್ಸಾಹ ಆಯೋಜಕರಲ್ಲಿ ಸಂತಸ ಮೂಡಿಸಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿದ್ದ ಡಿ.ಎಫ್.ಓ ಮಂಜುನಾಥ ಅವರು ಮಾತನಾಡುತ್ತಾ ಈಗಿನ ಪರಿಸ್ಥಿತಿಯಲ್ಲಿ ಹೇಗೆ ಸಸ್ಯಗಳು ನಾಶಹೊಂದುತ್ತಿವೆ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಏನೆಲ್ಲಾ ಅನಾಹುತಗಳಾಗುತ್ತಿವೆ. ಅದಕ್ಕೆ ಹೇಗೆ ಜಾಗೃತರಾಗಿರಬೇಕು ಎಂಬುದರ ಬಗ್ಗೆ ಮಕ್ಕಳಿಗೆ ತಿಳಿಸಿ ಹೇಳಿದರು. ಸಂಘಟಕರಾದ ವನವಾಸಿ ಕಲ್ಯಾಣ ಸಮಿತಿಯ ವಾಸುದೇವ ಪ್ರಭು, ಹಿಂದೂ ಜನಜಾಗೃತಿ ಸಮಿತಿಯ ಶಿವಾನಂದ ದೀಕ್ಷಿತ್, ಎಂ.ಇ.ಎಸ್ ಉಪ ಸಮಿತಿ ಸದಸ್ಯ ಎಸ್.ಎಸ್. ಭಟ್, ಶಾಲಾ ಮುಖ್ಯೋಪಾಧ್ಯಾಯಕಿ ಶರಾವತಿ ಭಟ್, ಶಾಲಾ ವತಿಯಿಂದ ವಿ.ಜಿ.ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಷ್ಟೇ ಅಲ್ಲದೇ ಅರಣ್ಯ ಅಧಿಕಾರಿ ರಮೇಶ್ ನಾಯ್ಕ್, ಹಿರಿಯ ಪತ್ರಕರ್ತ ಸಚ್ಚಿದಾನಂದ ಹೆಗಡೆ, ಜನಜಾಗೃತಿ ಸಮಿತಿಯ ಸದಸ್ಯರು, ತೇಲಂಗ ಪ್ರೌಢಶಾಲೆಯ ಶಿಕ್ಷಕರು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಮಕ್ಕಳ ಜೊತೆ ಭಾಗವಹಿಸಿದರು.

ವನವಾಸಿ ಕಲ್ಯಾಣದ ಶಿರಸಿ ನಗರ ಸಮಿತಿಯವರಿಂದ ಇಲ್ಲಿಯವರೆಗೆ ಬಹಳಷ್ಟು ಜನೋಪಕಾರಿ ಕಾರ್ಯಗಳಾಗಿದ್ದು ಅದರ ಪಟ್ಟಿಯಲ್ಲಿ ಇಂದಿನ ಕಾರ್ಯಕ್ರಮವೂ ಒಂದು ಗರಿಯಾಗಿದೆ. ಸಸ್ಯಗಳ ಬಗ್ಗೆ ಜನರಲ್ಲಿ ಜಾಗೃತಿ, ಮಕ್ಕಳಿಗಾಗಿ ಕಾರ್ಯಕ್ರಮಗಳು, ಶಿಬಿರಗಳು ಹಾಗೂ ಇಂತಹ ಹಲವಾರು ಕಾರ್ಯಗಳು ಆಗಾಗ ನಡೆಸುತ್ತಿರುವ ವನವಾಸಿ ಕಲ್ಯಾಣ ಸಮಿತಿ ದಿನದಿಂದ ದಿನಕ್ಕೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂದೆಯೂ ಹೆಚ್ಚೆಚ್ಚು ಉಪಯೋಗಿ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವುದಾಗಿ ಆ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ವನವಾಸಿ ಕಲ್ಯಾಣ ಸಮಿತಿ ವಾಸುದೇವ ಪ್ರಭುರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ