ಕಾರವಾರದಲ್ಲೊಂದು ನಾಗರಮಡಿ ಜಲಪಾತ

0
1276

ಪ್ರಕೃತಿ ಮಡಿಲಲ್ಲಿ ಅದೆಷ್ಟೋ ಅದ್ಭುತ ತಾಣಗಳು ಹುಟ್ಟಿಕೊಂಡಿರುತ್ತವೆ. ಇಂತಹ ತಾಣಗಳನ್ನ ನೋಡಿದ್ರೆ ಎಂತಹ ಒತ್ತಡದಲ್ಲಿರುವವರೂ ರಿಲಾಕ್ಸ್ ಮೂಡ್ ಗೆ ಜಾರಿಬಿಡ್ತಾರೆ. ಅಂತಹದ್ರಲ್ಲಿ ರುದ್ರ ರಮಣೀಯ ಜಲಪಾತಗಳು ಎಂಜಾಯ್ ಮಾಡಲು ಸಿಕ್ಕಿದ್ರೆ ಕೇಳ್ಬೇಕಾ..? ಹೌದು ಇವತ್ತು ನಾವು ನಿಮಗೆ ಅಂತಹುದೇ ಒಂದು ಜಲಸಿರಿಯ ತಾಣಕ್ಕೆ ಕೊಂಡೊಯ್ತಾ ಇದೀವಿ.. ಬನ್ನಿ ನಮ್ಮ ಪಯಣ ಆರಂಭಿಸೋಣ….

ಸುತ್ತಲೂ ದಟ್ಟ ಹಸಿರು ಕಾನನ..! ಹಸಿರ ವನಸಿರಿಯ ಮಧ್ಯದಿಂದ ಬಳುಕುತ್ತಾ ಬಳುಕುತ್ತಾ ಕಲ್ಬಂಡೆಯನ್ನ ಸೀಳಿಕೋಡು ಮೈದುಂಬಿ ಹರಿಯುತ್ತಿರೋ ಜಲಧಾರೆ.. ತನಗ್ಯಾರೂ ಸಾಟಿ ಇಲ್ಲವೇನೋ ಎಂಬಂತೆ ಬಿಂಕದಿಂದ ಬಾಗಿ ಧೊ ಎಂದು ಧುಮ್ಮಿಕ್ಕುತ್ತಿರೋ ಜಲಪಾತ. ಅದೆಂತಹ ಮೈಮಾಟ..! ಸ್ವರ್ಗವೇ ಧರೆಗಿಳಿದಂತೆ ಭಾಸವಾಗುವ ವಿಹಂಗಮ ನೋಟ.. ಇದುವೇ ಪ್ರಕೃತಿ ಸೌಂದರ್ಯದ ರಮ್ಯ ತಾಣ.. ಹೌದು ನಾವಿವತ್ತು ಮಳೆಗಾಲದಲ್ಲಿ ಹುಟ್ಟಿ ಬೇಸಿಗೆಯಲ್ಲಿ ಅದೃಷ್ಯವಾಗಿಬಿಡೋ ಜಲಪಾತವೊಂದನ್ನ ನಿಮಗೆ ತೋರಿಸ್ತೀವಿ. ಇದನ್ನ ನೋಡಿದ ನೀವು ಖಂಡಿತ ಇಲ್ಲಿಗೊಮ್ಮೆ ಬಂದು ಪ್ರಕೃತಿ ಸೌಂದರ್ಯವನ್ನ ಸವಿಯುವುದರಲ್ಲಿ ಅನುಮಾನವೇ ಇಲ್ಲ.. ಎಸ್.. ಅಂದಹಾಗೆ ಇಂತಹದ್ದೊಂದು ಜಲಪಾತ ಇರೋದು ಕಾರವಾರ ತಾಲೂಕಿನ ಚೆಂಡಿಯಾ ಎಂಬ ಗ್ರಾಮದ ಅರಣ್ಯ ಪ್ರದೇಶದಲ್ಲಿ. ಕಾರವಾರದಿಂದ ಕೇವಲ 15 ಕಿಮಿಗಳ ಅಂತರದಲ್ಲಿರುವ ಇದಕ್ಕೆ ನಾಗರಮಡಿ ಜಲಪಾತ ಅಂತ ಕರೀತಾರೆ. ಇದರ ವಿಶೇಷತೆ ಏನಂದ್ರೆ ಮಳೆಗಾಲದ ಜೂನ್‍ನಿಂದ ಅಕ್ಟೋಬರ್ ವರೆಗೂ ಕೇವಲ ನಾಲ್ಕು ತಿಂಗಳು ಮಾತ್ರ ಈ ಜಲಪಾತ ಮೈದುಂಬಿ ಹರಿದು ನಂತರ ಅದೃಷ್ಯವಾಗಿಬಿಡತ್ತೆ.

ನಾಗರಮಡಿ ಜಲಪಾತ ಪ್ರವಾಸಿಗರಿಗಂತೂ ಹೇಳಿ ಮಾಡಿಸಿದ ತಾಣ. ಇದು ತನ್ನ ಸೌದರ್ಯವನ್ನ ಉಣಬಡಿಸಲು ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ನಾಗರಮಡಿ ಜಲಪಾತಕ್ಕೆ ಕೇವಲ ಜಿಲ್ಲೆಯಿಂದಷ್ಟೆ ಅಲ್ಲದೆ ಹೊರ ಜಿಲ್ಲೆಯಿಂದಲೂ ಪ್ರವಾಸಿಗರು ಆಗಮಿಸಿ ಸೌದರ್ಯ ಸವಿಯುತ್ತಾರೆ. ನೂರಾರು ಪ್ರವಾಸಿಗರ ದಂಡೇ ಇಲ್ಲಿಗೆ ಬಂದು ಮಸ್ತ್ ಮಜಾ ಮಾಡ್ತಾರೆ. ಧುಮ್ಮಿಕ್ಕುವ ಜಲಧಾರೆಯಲ್ಲಿ ಮಿಂದೆದ್ದು ಸಖತ್ ಖುಷಿ ಪಡ್ತಾರೆ. ಮಕ್ಕಳು ಮಹಿಳೆಯರು ಯುವಕರಿಗೆ ಇಲ್ಲಿ ಸ್ವಿಮ್ ಮಾಡಲು ಹೇಳಿ ಮಾಡಿಸಿದ ಸ್ಥಳ. ಅಷ್ಟೊಂದು ಆಳವಿಲ್ಲದಿದ್ದರೂ ಎಚ್ಚರ ತಪ್ಪಿದರೆ ಅಪಾಯ ಖಂಡಿತ. ಒಟ್ಟಾರೆ ಈ ಪಾಲ್ಸ್ ಎಂಜಾಯ್ ಮಾಡಲು ಸೂಪರ್ ಸ್ಪಾಟ್ ಅಂತಾರೆ ಪ್ರವಾಸಿಗರು.

ಇಷ್ಟೆಲ್ಲಾ ಸೌದರ್ಯವನ್ನ ಹುದುಗಿಸಿಟ್ಟುಕೊಂಡ ಈ ಪ್ರದೇಶಕ್ಕೆ ಬರಬೇಕೆಂದರೆ ಸರಿಯಾದ ರಸ್ತೆಯಿಲ್ಲ. ಈ ಜಲಪಾತದ ಕುರಿತು ಮಾಹಿತಿ ನೀಡುವ ಕುರುಹುಗಳೂ ಇಲ್ಲಿ ಕಾಣಿಸೋದಿಲ್ಲ. ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ ಇಲ್ಲಿ ಎದ್ದು ಕಾಣುತ್ತಿರುವುದು ವಿಷಾದನೀಯ. ಯಾವೊಂದೂ ಮೂಲಭೂತ ಸೌಕರ್ಯಗಳಿಲ್ಲದಿರುವ ಜೊತೆಗೆ ಸೂಕ್ತ ಭದ್ರತೆ ಕೂಡಾ ಇಲ್ಲದಿರುವುದಕ್ಕೆ ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಾರೆ.

ಇನ್ನು ಈ ಪ್ರದೇಶದಲ್ಲಿ ಕಿಡಿಗೇಡಿಗಳು ಪ್ಲಾಸ್ಟಿಕ್ ಮಧ್ಯದ ಬಾಟಲಿಗಳನ್ನ ಎಸೆದು ಪ್ರಕೃತಿಯನ್ನ ಹಾಳುಮಾಡುತ್ತಿದ್ದಾರೆ. ಕಲ್ಲುಬಂಡೆಗಳ ಮೇಲೆಲ್ಲಾ ಹೆಸರು ಬರೆದು ರಮ್ಯ ತಾಣದ ಅಂದಗೆಡಿಸುತ್ತಿದ್ದಾರೆ. ಇವೆಲ್ಲಕ್ಕೂ ಸಂಬಂಧಪಟ್ಟ ಇಲಾಖೆ ಬ್ರೇಕ್ ಹಾಕಿ ಈ ಪ್ರದೇಶವನ್ನ ರಕ್ಷಿಸಬೇಕಿದೆ.

ಅದೇನೇ ಇರಲಿ ಒಟ್ಟಿನಲ್ಲಿ ಹತ್ತು ಹಲವು ಜಂಜಾಟದಿಂದ ಮನಸ್ಸು ಬೇಸತ್ತಿದ್ರೆ ಕೂಡಲೆ ಈ ನಾಗರಮಡಿ ಪಾಲ್ಸ್ ಗೆ ಬಂದು ಎಂಜಾಯ್ ಮಾಡಿ ರಿಲ್ಯಾಕ್ಷ ಆಗಿ. ರಾಜ್ಯದ ಬೇರೆಲ್ಲಾ

 

ಜಲಪಾತಗಳಿಗಿಂತ ನಾಗರಮಡಿ ಜಲಪಾತ ಮತ್ತೊಂದಿಷ್ಟು ಹೆಚ್ಚು ಮುದ ನೀಡಬಹುದು.ಖಂಡಿತ ಮಿಸ್ ಮಾಡ್ಕೋಳೋಲ್ಲ ತಾನೆ…!!!

ಸಚಿತ್ರ ವರದಿ
– ಸುಧನ್ವ ಖರೆ

ಪ್ರತ್ಯುತ್ತರಿಸಿ

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ