ತೈವಾನಿನ ಚೈನಿಸ್ ತೈಪೆಯಲ್ಲಿ ಕುವೋ-ಚಿ-ಜು ಎನ್ನುವ ಪ್ರಾಸಿಕ್ಯೂಟರ್ ಒಬ್ಬನಿದ್ದ. ನಮ್ಗೆ ನಿಮ್ಗೆ ಗೊತ್ತಿರೋ ಹಾಗೆ ಆ ಹುದ್ದೆಲಿದ್ದವರಿಗೆ ಭಾಷಣ ಮಾಡುವ ಸಂದರ್ಭ ಆಗಾಗ ಬರ್ತಾ ಇರತ್ತೆ. ಸ್ಥಳಿಯ ಸಂಘ ಸಂಸ್ಥೆಗಳು, ಬೇರೆ ಬೇರೆ ಮಂಡಳಿಯವರು, ಸಾರ್ವಜನಿಕ ವೇದಿಕೆಯವರು ಹೀಗೆ ಆಗಾಗ ಚಿ-ಜು ಗೆ ಮುಖ್ಯ ಅತಿಥಿಯಾಗಿ ಹಲವರು ಆಹ್ವಾನಿಸುತ್ತಾ ಇದ್ದರು. ಆದರೆ ಇವನಿಗೋ; ಭಾಷಣವೆಂದರೆ ಒಂದು ರೀತಿಯ ಹಿಂಜರಿಕೆ, ಇರಿಸುಮುರುಸು. ಒಂದು ಚಿಕ್ಕ ಗುಂಪಿನವರ ಎದುರಿಗೂ ಮಾತನಾಡಲು ಸಂಕೋಚ ಪಡುತ್ತಿದ್ದ.

ಇವನ ಇಂಥ ಭಯ ಇವನ ಪ್ರಗತಿಗೆ ಮಾರಕವಾಗಿ ಪರಿಣಮಿಸುತ್ತಿತ್ತು. ಇವನು ಎಲ್ಲಾ ಕಾರ್ಯಕ್ರಮಗಳನ್ನೂ ತಿರಸ್ಕರಿಸುತ್ತಿದ್ದರಿಂದ ಜನರೂ ಇವನನ್ನು ಕರೆಯಲು ಇಷ್ಟಪಡುತ್ತಿರಲಿಲ್ಲ. ಈ ಸಂವಹನ ಸಮಸ್ಯೆ ಚಿ-ಜು ಬಾಳಲ್ಲಿ ಬಹುದೊಡ್ಡ ಕಂದಕ ಸೃಷ್ಟಿಸಿತ್ತು. ಇದರಿಂದ ಹೊರಬರಲೇ ಬೇಕೆಂಬ ದೃಢನಿರ್ಧಾರಕ್ಕೆ ಬಂದನು ಅವನು.

ಇದೇ ಸಂದರ್ಭದಲ್ಲಿ ಚಿ-ಜು ಗೆ ಅವನು ಕಲಿತ ಶಾಲೆಯಿಂದಲೇ ಒಂದು ಆಹ್ವಾನ ಬಂತು. ಈ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕೆಂದು ನಿರ್ಧರಿಸಿದ್ದ ಆತ. ಒಂದಷ್ಟು ಪೂರ್ವ ತಯಾರಿ ಮಾಡಿಕೊಂಡ. ತನಗೆ ತಿಳಿದ ವಿಷಯವನ್ನೇ ಮಾತನಾಡಬೇಕೆಂದು ನಿರ್ಧರಿಸಿದ. ಒಬ್ಬ ಪ್ರಾಸಿಕ್ಯೂಟರ್ ಆಗಿ ತನ್ನ ಕೆಲಸ, ಅದರಲ್ಲಿನ ಸವಾಲುಗಳ ಜೊತೆಗೆ ತಾನು ಕಂಡ ನಿಜ ಘಟನೆಯನ್ನೇ ಉದಾಹರಣೆಯಾಗಿ ಸೇರಿಸಿ ಭಾಷಣ ಮಾಡಿದ. ಇದಕ್ಕಾಗಿ ಅವನು ಯಾವುದೇ ಕಂಠಪಾಠವಾಗಲಿ ಮಾಡಿರಲಿಲ್ಲ, ಚೀಟಿಯಾಗಲಿ ತೆಗೆದುಕೊಳ್ಳಲಿಲ್ಲ. ನೇರವಾಗಿ ವೇದಿಕೆಯನ್ನೇರಿ ತನ್ನ ಗೆಳೆಯರೊಂದಿಗೆ ಮಾತನಾಡುವಂತೆ ಮಾತನಾಡತೊಡಗಿದ.

ನಿಜಕ್ಕೂ ಆ ಭಾಷಣ ಅದ್ಭುತವಾಗಿತ್ತು! ಅವನ ಪ್ರಯತ್ನ ಯಶಸ್ವಿಯಾಗಿತ್ತು. ಕೇಳುಗರ ಆಸಕ್ತಿ ಕೆರಳಿಸುವಲ್ಲಿ ಆತ ಯಶ ಕಂಡಿದ್ದ. ಅಂದೇ ಚಿ-ಜು ಕೆಲ ಅಮೂಲ್ಯ ಪಾಠಗಳನ್ನೂ ಕಲಿತ. ಅವನು ಅಷ್ಟಕ್ಕೇ ನಿಲ್ಲದೆ, ಅವಕಾಶ ಸಿಕ್ಕಾಗಲೆಲ್ಲಾ ಭಾಷಣ ಮಾಡುತ್ತಾ ಹೋದ. ತೈಪೆಯ ಭಾಷಣಕಾರರಲ್ಲೇ ಅಚ್ಚುಮೆಚ್ಚಿನವನಾಗಿ ಗುರುತಿಸಿಕೊಂಡ. ಶೀಘ್ರವಾಗಿ ಚೀಫ್ ಪ್ರಾಸಿಕ್ಯೂಟರ್ ಹುದ್ದೆಗೇರಿದ.

ಈ ನೈಜ ಘಟನೆಯಿಂದ ನಾವು ನೀವು ಕಲಿಯುವ ಪಾಠ ಏನೆಂದ್ರೆ ಸಂವಹನ ಒಂದು ಪರಸ್ಪರ ನಂಬಿಕೆ, ವಿಶ್ವಾಸದ ನೆಲೆಗಟ್ಟಿನಲ್ಲಿ ನಿಂತಿರುತ್ತದೆ. ಭಯ ಬಿಟ್ಟು ಮುನ್ನಡೆಯಿರಿ. ಯಶಸ್ಸು ನಿಮ್ಮ ಹಿಂದೆ ಬಂದೇ ಬರುತ್ತದೆ.

– ಲಗೋರಿಬಾಬಾ

LEAVE A REPLY

Please enter your comment!
Please enter your name here