ದಾಂಡೇಲಿ, ಸೆ.೨೩: ತನ್ನ ಅಪ್ತಾಪ್ತ ಮಗಳನ್ನು ಚುಡಾಯಿಸಿದ ಹುಡುಗನಿಗೆ ಬೈದು ಬುದ್ದಿ ಮಾತು ಹೇಳಿದ ತಂದೆಯ ಮೇಲೆಯೇ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸಾಯಿಸಲೆತ್ನಿಸಿದ ಘಟನೆ ದಾಂಡೇಲಿಯ ಮಾರುತಿನಗರದಲ್ಲಿ ನಡೆದಿದೆ.

ಟೌನ್‍ಶಿಪ್‍ನ ವಾಸಿಂ ಸಲಿಂ ಶೇಖ ಎಂಬವರೇ ಹಲ್ಲೆಗೊಳಗಾಗಿರುವ ವ್ಯಕ್ತಿಯಾಗಿದ್ದು, ಗಾಯಗೊಂಡಿರುವ ಇವರನ್ನು ಹುಬ್ಬಳ್ಳಿಯ ಎಸ್.ಡಿ.ಎಮ್. ಆಸ್ಪತ್ರೆಗೆ ಸಾಗಿಸಲಾಗಿದೆ. ವಾಸಿಂ ಸಲಿಂ ಶೇಖ್ ಇವರು ತನ್ನ ಅಪ್ರಾಪ್ತ ಮಗಳಿಗೆ ಚುಡಾಯಿಸಿದ್ದ ಮಾರುತಿನಗರದ ಪೈಜಾನ್ ಅಬ್ದುಲ ವಹಾಬ ಮನೆಯ ಹತ್ತಿರ ಹೋಗಿ ಬುದ್ದಿವಾದ ಹೇಳುವ ಸಂದರ್ಭದಲ್ಲಿ ಫೈಜಾನ ಮತ್ತು ಆತನ ತಾಯಿ ವಸೀಂ ಶೇಖ್‍ಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಅಲ್ಲಿಂದ ಮರಳಿ ಬಂದ ವಾಸಿಮ್ ಮಾರುತಿನಗರದ ಪರಿಚಯದ ವ್ಯಕ್ತಿ ಇಮ್ರಾನ್ ಖಾನ್ ಹತ್ತಿರ ಮಾತನಾಡುತ್ತಿರುವಾಗ ಕೈಯ್ಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದ ಜನರ ಗುಂಪು ವಸೀಂ ಶೇಖ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ಸಂದರ್ಭದಲ್ಲಿ ಬಿಡಿಸಲು ಹೋದ ಇಮ್ರಾನ್ ಖಾನ್ ಮೇಲೂ ಆ ಜನರು ಹಲ್ಲೆ ನಡೆಸಿದ್ದು ಇಮ್ರಾನ್ ಖಾನ್ ಕೂಡಾ ಗಾಯಗೊಂಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.

ಗಂಬೀರ ಸ್ವರೂಪದ ಗಾಯಗೊಂಡ ವಾಸಿಮ್‍ಗೆ ತಲೆಗೆ ಪೆಟ್ಟು ಬಿದ್ದುದರಿಂದ ಎಸ್.ಡಿ.ಎಮ್.ಗೆ ಸಾಗಿಸಲಾಗಿದೆ. ಈ ಬಗ್ಗೆ ವಾಸಿಂ ಶೇಖ ನಗರ ಪೋಲಿಸ್ ಠಾಣೆಯಲ್ಲಿ ಪೈಜಾನ್ ಮತ್ತು 8-10 ಜನರು ಸೇರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರು ದಾಖಲಿಸಿದ್ದಾರೆ.

ಇದೇ ಘಟನೆಗೆ ಸಂಬಂದಿಸಿ ಫೈಜಾನ್ ತಾಯಿ ನಸೀಮಾ ಅಬ್ದುಲ್ ವಹಾಬ್ ದಪೇದಾರ ನಗರ ಪೋಲಿಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ತನ್ನ ಮಗ ಫೈಜಾನ ಹೊರಗೆ ಹೋಗಿದ್ದ ಸಂದರ್ಭದಲ್ಲಿ ವಾಸಿಂ ಶೇಖ, ಮತ್ತೊಬ್ಬನ ಜೊತೆ ಸೇರಿಕೊಂಡು ನನ್ನ ಮಗನ ಕಾಲರ್ ಹಿಡಿದು, ಕೆನ್ನೆಗೆ ಹೊಡೆದು, ‘ನನ್ನ ಮಗಳಿಗೆ ಚುಡಾಯಿಸುತ್ತಿಯಾ?’ ಎನ್ನುತ್ತ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆಹಾಕಿರುತ್ತಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. ಸರಕಾರಿ ಆಸ್ಪತ್ತೆಯಲ್ಲಿ ಚಿಕಿತ್ಸೆ ಪಡೆದಿರುವ ಪೈಜಾನ್ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಎಸ್.ಡಿ.ಎಮ್.ಗೆ ದಾಖಲಿಸಿದ್ದಾರೆ.

ನಗರ ಠಾಣೆಯ ಪಿ.ಎಸ್.ಐ ಉಲ್ಲಾಸ ಪರವಾರ ಎರಡೂ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here